ಏಳು ವಾರಗಳ ಯುದ್ಧ: ಆಸ್ಟ್ರಿಯ, ಸ್ಯಾಕ್ಸನಿ, ಹ್ಯಾನೊವರ್, ಬವೇರಿಯ, ವರ್ಟೆಂಬರ್ಗ್, ಬಾಡೆನ್, ಹೆಚ್-ಕ್ಯಾಸಲ್, ಹೆಸ್-ಡಾರ್ಮ್ಷ್ಟಾಟ್ ಮತ್ತು ನಾಸೊಗಳಿಗೂ ಪ್ರಷ್ಯ ಮತ್ತು ಇಟಲಿಗಳಿಗೂ ನಡುವೆ 1866ರಲ್ಲಿ ನಡೆದ ಯುದ್ಧ (ಸೆವೆನ್ ವೀಕ್ಸ್‌ ವಾರ್). ಮುಖ್ಯವಾಗಿ ಆಸ್ಟ್ರಿಯ-ಪ್ರಷ್ಯಗಳ ದೀರ್ಘ ವಿರಸದ ಫಲವಾಗಿದ್ದು, ಅಂತ್ಯದಲ್ಲಿ ಇದು ಪರಿಹಾರವಾದ್ದರಿಂದ ಇದು ಆಸ್ಟ್ರೊ-ಪ್ರಷ್ಯನ್ ಯುದ್ಧವೆಂದೂ ಹೆಸರಾಗಿದೆ.

1815ರಲ್ಲಿ ಸ್ಥಾಪಿತವಾಗಿದ್ದ ಜರ್ಮನ್ ಸಂಧಿಕೂಟದಲ್ಲಿ ಪ್ರಾಬಲ್ಯ ಗಳಿಸಲು ಆಸ್ಟ್ರಿಯಕ್ಕೂ ಪ್ರಷ್ಯಕ್ಕೂ ನಡುವೆ ತೀವ್ರ ಸ್ಪರ್ಧೆ ನಡೆದಿತ್ತು. ಪ್ರಷ್ಯ ಆಗ ರಾಷ್ಟ್ರೀಯತ್ವ ಪ್ರತಿಪಾದಕ ರಾಷ್ಟ್ರ. ಆಸ್ಟ್ರಿಯ ಇದಕ್ಕೆ ವಿರುದ್ಧ, ಆಸ್ಟ್ರಿಯವನ್ನುಳಿದು ಎಲ್ಲ ಜರ್ಮನ್ ರಾಜ್ಯಗಳನ್ನೂ ಒಗ್ಗೂಡಿಸುವುದು ಪ್ರಷ್ಯದ ಬಂiÀÄಕೆ. ಆದರೆ ಆಸ್ಟ್ರಿಯದ ವಿರೋಧದಿಂದ ಇದು ಸಾಧ್ಯವಾಗಿರಲಿಲ್ಲ. ಆಸ್ಟ್ರಿಯನ್ ಸಾಮ್ರಾಜ್ಯವನ್ನು ಜರ್ಮನ್ ಸಂಧಿಕೂಟದೊಂದಿಗೆ ಸೇರಿಸಬೇಕೆಂಬ ಆಸ್ಟ್ರಿಯನ್ ಹಂಬಲವನ್ನು ಡ್ರೆಸ್ಡೆನ್ ಸಮ್ಮೇಳನ ತಿರಸ್ಕರಿಸಿತ್ತು. 1862ರಲ್ಲಿ ಪ್ರಷ್ಯದ ಪ್ರಧಾನಿಯಾಗಿದ್ದ ಬಿಸ್ಮಾರ್ಕ್ ಜರ್ಮನಿಯನ್ನು ಒಗ್ಗೂಡಿಸುವ ಕಾರ್ಯದಲ್ಲಿ ಉದ್ಯುಕ್ತನಾಗಿದ್ದ. ಇದು ಆಸ್ಟ್ರಿಯಕ್ಕೆ ಸಹ್ಯವಾಗಿರಲಿಲ್ಲ.

ಭೌಗೋಳಿಕ ಕಾರಣಗಳಿಗಾಗಿ ಸ್ಯಾಕ್ಸನಿ ಆಸ್ಟ್ರಿಯದ ಕಡೆ ಸೇರಿಕೊಂಡಾಗ ಪ್ರಷ್ಯ ಸೈನ್ಯಗಳನ್ನು ಜಮಾಯಿಸಿಕೊಂಡು ಸ್ಯಾಕ್ಸನಿ ಮತ್ತು ಬೊಹಿಮಿಯಗಳ ಆಕ್ರಮಣ ನಡೆಸಿತು. ಅನಂತರ ಸ್ಯಾಡೋವಾದಲ್ಲಿ ಆಸ್ಟ್ರಿಯ ಸೈನ್ಯಕ್ಕೂ ಪರಾಭವವುಂಟಾಯಿತು. ಆಸ್ಟ್ರಿಯದ ಕಡೆ ಒಲಿದಿದ್ದ ಕೆಲವು ಜರ್ಮನ್ ರಾಜ್ಯಗಳು ಪ್ರಷ್ಯದ ಅಧಿನಾಯಕತ್ವವನ್ನು ಒಪ್ಪಿಕೊಳ್ಳಬೇಕಾಯಿತು. ಏಳು ವಾರಗಳಲ್ಲಿ ಮುಗಿದ ಈ ಯುದ್ಧವೇ ಜರ್ಮನಿಯ ಏಕೀಕರಣಕ್ಕೆ ನಾಂದಿಯಾಯಿತೆನ್ನಬಹುದು. ಪ್ರಷ್ಯದೊಡನೆ ಸೇರಿದ್ದಕ್ಕಾಗಿ ವಿನೀಷಿಯ ಸಿಕ್ಕಿದ್ದೇ ಇಟಲಿಗೆ ಆದ ಲಾಭ.                                             (ಎ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ